ಮೌಂಟ್‍ಬ್ಯಾಟನ್, ಲೂಯಿಸ್
 	1900-79. ಭಾರತದ ಕೊನೆಯ ವೈಸ್‍ರಾಯ್ ಹಾಗೂ ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್. ಬ್ರಿಟಿಷ್ ಭೂ, ನೌಕಾ ಮತ್ತು ವಾಯುಪಡೆಗಳ ಮೇಲಾಧಿಕಾರಿ ಮತ್ತು ಕಮಾಂಡೋಗಳ ಮುಖ್ಯಸ್ಥ; ರಾಜನೀತಿಜ್ಞ. ಲೂಯಿಸ್ ಫ್ರಾನ್ಸಿಸ್ ಆಲ್ಬರ್ಟ್ ವಿಕ್ಟರ್ ನಿಕೊಲಾಸ್ ಎಂಬುದು ಇವನ ಮೊದಲ ಹೆಸರು. 

		ಐದನೆಯ ಜಾರ್ಜ್‍ನ ರಕ್ತಸಂಬಂಧಿ. ಆಸ್ಟ್ರಿಯಾ ಸಂಜಾತ ಬ್ಯಾಟನ್ ಬರ್ಗ್‍ನ ದೊರೆ ಲೂಯಿಸ್ ಅಲೆಕ್ಸಾಂಡರ್ ಈತನ ತಂದೆ. ಇಂಗ್ಲೆಂಡಿನ ರಾಣಿ ವಿಕ್ಟೋರಿಯಾಳ ಮೊಮ್ಮಗಳು ರಾಣಿ ವಿಕ್ಟೋರಿಯ ಈತನ ತಾಯಿ. ಈ ದಂಪತಿಗಳಿಗೆ ನಾಲ್ಕನೆಯ ಮಗನಾಗಿ 25ಜೂನ್ 1900ರಲ್ಲಿ ವಿಂಡ್ಸರ್‍ನಲ್ಲಿ ಜನಿಸಿದ. ಲಾಕರ್ಸ್‍ಪಾರ್ಕ್, ಒಸ್‍ಬೋರ್ನ್ ಮತ್ತು ಡಾರ್ಟ್‍ಮೌತ್‍ಗಳಲ್ಲಿ ವಿದ್ಯಾಭ್ಯಾಸ ಪಡೆದ. 1913ರಲ್ಲಿ ನೌಕಾಪಡೆಯ ವಿದ್ಯಾರ್ಥಿಯಾಗಿ ರಾಯಲ್ ನೌಕಾಪಡೆಯನ್ನು ಸೇರಿ 1916ರಲ್ಲಿ ಹಡಗಿನ ಮಿಡ್‍ಷಿಪ್‍ಮ್ಯಾನ ಆದ. ಅನಂತರ 12ನೆಯ ಸಬ್‍ಮೆರಿನ್ ಫ್ಲೊಟಿಲ್ಲಾದಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸಿದ. ಅನಂತರ 1920ರಲ್ಲಿ ಲೆಫ್ಟಿನೆಂಟ್ ಆದ. ಇದೇ ಸಮಯದಲ್ಲಿ ಲಾರ್ಡ್ ಪದವಿಯನ್ನು ಗಳಿಸಿದ; ಮೌಂಟ್‍ಬ್ಯಾಟನ್ ಲೂಯಿಸ್ ಲಾರ್ಡ್ ಎಂದು ಹೆಸರು ಬದಲಾಯಿಸಿಕೊಂಡ. ಮಿಲಫೋರ್ಡ್ ಹೆವನ್‍ನ ಮೊದಲ ಮಾಕ್ರ್ವೆಸ್ ಆಗಿ ಶ್ರೀಮಂತ ಪದವಿಗೆ ಏರಿದ. 1921ರಲ್ಲಿ ವೇಲ್ಸ್‍ನ ರಾಜಕುಮಾರನಿಗೆ ಸೇನಾಪತಿ ಸಹಾಯಕನಾಗಿ (ಏಡ್-ಡ-ಕ್ಯಾಂಪ್) ಭಾರತ, ಜಪಾನ್ ಮತ್ತು ದೂರಪೂರ್ವದೇಶಗಳಿಗೆ ಪ್ರವಾಸಕೈಗೊಂಡ. 1922ರಲ್ಲಿ ಬ್ರಿಟಿಷ್ ಸಾರಿಗೆ ಸಚಿವ ಲಾರ್ಡ್‍ಮೌಂಟ್ ಟೆಂಪಲ್‍ನ ಮಗಳಾದ ಎಡ್ವಿನಾ ಸಿಂಥಿಯಾ ಆನೆಟ್ ಅಷ್‍ಲೀ ಎಂಬುವಳನ್ನು ಮದುವೆಯಾದ. 1928ರಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ, 1932ರಲ್ಲಿ ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದ. ಮುಂದಿನ ವರ್ಷವೇ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳ ನಿರೂಪಕನಾಗಿ ಅರ್ಹತೆ ಗಳಿಸಿದ. 1937ರಲ್ಲಿ ಆರನೆಯ ಜಾರ್ಜ್ ದೊರೆಯ ಆಪ್ತಸೇನಾಪತಿ ಸಹಾಯಕನಾದ. `ಕೆಲ್ಲಿ ಮತ್ತು 5ನೆಯ ಫ್ಲೊಟಿಲ್ಲಾ ವಿಧ್ವಂಸಕಗಳ ಹತೋಟಿಗಾಗಿ ಕಮಾಂಡರ್ ಆಗಿ ನೇಮಕಗೊಂಡ. 1941ರಲ್ಲಿ ವಾಯುಪಡೆಯ ಕಮಾಂಡರ್ ಆದ. 1943-46ರ ಅವಧಿಗೆ ಆಗ್ನೇಯ ಏಷ್ಯಕ್ಕೆ ಸಂಬಂಧಿಸಿದಂತೆ ಪ್ರಧಾನ ದಂಡನಾಯಕನಾಗಿ ಅಧಿಕಾರವಹಿಸಿಕೊಂಡ. ಬರ್ಮದ ಮೇಲೆ ದಾಳಿ ನಡೆಸಲು ಯತ್ನಿಸಿದ ಜಪಾನಿನ ಮೇಲೆ ಯಶಸ್ವಿಯಾಗಿ ಅಕ್ರಮಣ ನಡೆಸಿದ. 

		1943ರ ವೇಳೆಗೆ ಭಾರತದ ವೈಸ್‍ರಾಯ್ ಆಗಿ ನೇಮಕಗೊಂಡಿದ್ದ ಲಾರ್ಡ್ ವೇವೆಲ್ ದುರ್ಬಲ ಆಡಳಿತಗಾರನಾದುದರ ಪ್ರಯುಕ್ತ ಇಡೀ ದೇಶದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಬಿತ್ತು. ಇಂಗ್ಲೆಂಡಿನಲ್ಲಿ ಅಧಿಕಾರಕ್ಕೆ ಬಂದ ಲೇಬರ್ ಪಕ್ಷದ ಸರ್ಕಾರಕ್ಕೆ ಇದರಿಂದ ಕಸಿವಿಸಿಯುಂಟಾಯಿತು. ಆಗ ಪ್ರಧಾನಿಯಾಗಿದ್ದ ಕ್ಲೆಮೆಂಟ್ ಆಟ್ಲಿ 24 ಮಾರ್ಚ್ 1947ರಂದು ಲಾರ್ಡ್‍ವೇವೆಲ್‍ನನ್ನು ಹಿಂದಕ್ಕೆ ಕರೆಸಿಕೊಂಡು ಆ ಸ್ಥಾನದಲ್ಲಿ ಮೌಂಟ್ ಬ್ಯಾಟನ್‍ನನ್ನು ವೈಸ್‍ರಾಯ್ ಆಗಿ ನೇಮಿಸಿದ. ಭಾರತವನ್ನು ಹಿಂದೂ ಮತ್ತು ಮುಸ್ಲಿಂ ಪ್ರಾಂತ್ಯಗಳು ಎಂದು ವಿಭಜಿಸಿ ಅದರಂತೆ ಭಾರತ ಮತ್ತು ಪಾಕಿಸ್ತಾನ ಎಂಬೆರಡು ಸ್ವತಂತ್ರ ರಾಷ್ಟ್ರಗಳಿಗೆ 15 ಆಗಸ್ಟ್ 1947ರಲ್ಲಿ ಅಧಿಕಾರದ ಹಸ್ತಾಂತರ ಮಾಡಿದ. ಅನಂತರ 1948ರ ಜೂನ್ ತನಕ ಸ್ವತಂತ್ರ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿ ಕಾರ್ಯನಿರ್ವಹಿಸಿದ. 

	ಇಂಗ್ಲೆಂಡಿಗೆ ವಾಪಸಾದ ಅನಂತರ ಈತ ನಾಲ್ಕನೆಯ ಸೀಲಾರ್ಡ್ (1950-52), ಮೆಡಿಟರೇನಿಯನ್ ನೌಕಾಬಲದ ಪ್ರಧಾನ ಸೇನಾಧಿಪತಿ (1952-54), ಪ್ರಥಮ ಸೀಲಾರ್ಡ್ (1955-59) ಆಗಿ ಸೇವೆ ಸಲ್ಲಿಸಿದ. 1956ರಲ್ಲಿ ನೌಕಾಬಲದ ಅಧಿಪತಿಯಾಗಿ, ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥನಾಗಿ (1959-65) ಕಾರ್ಯ ನಿರ್ವಹಿಸಿದ. 27 ಆಗಸ್ಟ್ 1979ರಲ್ಲಿ ಐರಿಷ್ ರಿಪಬ್ಲಿಕನ್ ಸೇನೆಯಿಂದ ಹತ್ಯೆಗೀಡಾದ.
(ಬಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ